ವಿಠ್ಠಲರಾವ್ ಠಕ್ಕಳಕಿ
(1922- ). ಉತ್ತರ ಕರ್ನಾಟಕದ ಶ್ರೀಮಂತ ಜನಪದ ನಾಟಕವಾಗಿರುವ ಶ್ರೀ ಕೃಷ್ಣಪಾರಿಜಾತದ ಸುಪ್ರಸಿದ್ಧ ಕಲಾವಿದರು. ವಿಠ್ಠಲರಾವ್ ಅವರ ಮನೆ ಹೆಸರು ನಾವಿ. ಜಮಖಂಡಿ ತಾಲೂಕಿನ ಒಂದು ಹಳ್ಳಿ. ತಮ್ಮ ಊರಿನ ಹೆಸರಿನಿಂದಲೇ ಅವರು ಗುರುತಿಸಲ್ಪಟ್ಟಿದ್ದಾರೆ ಮತ್ತು ಪ್ರಸಿದ್ಧಿ ಪಡೆದಿದ್ದಾರೆ. ಓದಿದ್ದು ಮರಾಠಿ ಶಾಲೆಯಲ್ಲಿ ಮೂರನೆಯ ತರಗತಿಯವರೆಗೆ, ಖಾಸಗಿಯಾಗಿ ಕನ್ನಡ ಕಲಿತರು. ತಂದೆ ಸಿದ್ಧಪ್ಪ ಡಪ್ಪಿನಾಟದ ಕಲಾವಿದರು. ಹಾಡುಗಾರಿಕೆ, ಅಭಿನಯ ಬಾಲ್ಯದಿಂದಲೇ ಬೆಳೆದು ಬರಲು ತಂದೆಯ ಪ್ರೇರಣೆ, ಪ್ರಭಾವಗಳು ಕಾರಣವಾದವು. ಎಂಟನೇ ವಯಸ್ಸಿನಲ್ಲಿ ಆಲಗೂರ ಗುರಪ್ಪ ಮಾಸ್ತರರ ಶಿಷ್ಯತ್ವ ವಹಿಸಿ ಶ್ರೀ ಕೃಷ್ಣ ಪಾರಿಜಾತದ ಕಲಿಕೆ ಪ್ರಾರಂಭಿಸಿದರು. ಆಗ ವಿಟ್ಠಲರಾವ್ ಅವರದು ಬಾಲಗೋಪಾಲನ ಪಾತ್ರ. ಅವರು ಪಾರಿಜಾತದ ಎಲ್ಲ ಪಾತ್ರ ಸನ್ನಿವೇಶಗಳಲ್ಲಿ ಪರಿಣತಿ ಪಡೆದ ಮೇಲೆ ಹನ್ನೆರಡನೆಯ ವಯಸ್ಸಿಗೆ ಕೃಷ್ಣನ ಪಾತ್ರಕ್ಕೆ ಮುಂಬಡ್ತಿ ಪಡೆದರು. ಶೂರ್ಪಾಲಿ ಅಚ್ಯುತಾಚಾರ್ಯರ ಗರಡಿಯಲ್ಲಿ ಪಳಗಿದ ವಿಠ್ಠಲರಾವ್ ಅವರು ಕೃಷ್ಣನ ಪಾತ್ರಕ್ಕೆ ವಿಶಿಷ್ಟ ಮೆರಗು ತಂದುಕೊಟ್ಟರು. ಶಾಸ್ತಜ್ಞಾನ, ತರ್ಕಬದ್ಧ ಸಂಭಾಷಣೆ, ಇಂಪಾದ ಹಾಡುಗಾರಿಕೆ, ಸಂದರ್ಭಕ್ಕೆ ತಕ್ಕಂತೆ ಪುರಾಣ ಪ್ರಸಂಗಗಳ ಬಳಕೆ - ಈ ಎಲ್ಲ ಅಂಶಗಳಿಂದಾಗಿ ಅವರ ಕೃಷ್ಣನ ಪಾತ್ರದ ಅಭಿನಯ ಮನೆಮಾತಾಯಿತು. ಶಾಸ್ತ್ರೀಯ ಸಂಗೀತವನ್ನು ಗಂಭಿರವಾಗಿ ಅಭ್ಯಾಸ ಮಾಡಿದುದರಿಂದ ವಿಟ್ಠಲರಾವ್ ಅವರ ಹಾಡುಗಾರಿಕೆ ಹೊಸ ಆಯಾಮ ಪಡೆದುಕೊಂಡಿತು. ಹೀಗೆ ಅವರು ಕೃಷ್ಣನ ಪಾತ್ರವನ್ನು ವಿಸ್ತರಿಗೆ ಅದಕ್ಕೊಂದು ವಿಶಿಷ್ಟ ಸ್ಥಾನ ನೀಡಿದರು. ಅವರ ಕೃಷ್ಣಪಾತ್ರದ ಅಭಿನಯ ಒಂದು ಪರಂಪರೆಯಾಗಿ ಬೆಳೆದು ಬಂದದೊಂದು ವಿಶೇಷ. ಇನ್ನೊಬ್ಬ ಪಾರಿಜಾತ ತಾರೆ ಅಪ್ಪಲಾಲ ಜಮಖಂಡಿ ಅವರ ಕಂಪನಿಯಲ್ಲಿ ಹದಿನೈದು ವರ್ಷ ಸೇವೆ ಸಲ್ಲಿಸಿದ ವಿಠ್ಠಲರಾವ್ ಅವರು ನಂತರ ಸ್ವಂತ ಕಂಪನಿ ಮಾಡಿಕೊಂಡರು. ಅವರ ಕಂಪನಿ ಈತ್ತಿಚಿನವರೆಗೆ ಚಟುವಟಿಕೆಯಿಂದಿತ್ತು. ವಿಠ್ಠಲರಾವ್ ತಮ್ಮ ಎಂಭತ್ತನೆಯ ವಯಸ್ಸಿನವರೆಗೆ ಕೃಷ್ಣನ ಪಾತ್ರ ನಿರ್ವಹಿಸಿದ ಅದ್ಭುತ ನಾಯಕನಟರಾಗಿದ್ದಾರೆ. ಅವರಿಗೆ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಮತ್ತು 2000ನೇ ಸಾಲಿನ ಜಾನಪದಶ್ರೀ ಪ್ರಶಸ್ತಿಗಳು ಸಂದಿವೆ. 
(ಬಸವರಾಜು ಮಲಶೆಟ್ಟಿ)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ